Thursday, 2 February 2012

ಪ್ರಕೃತಿ ಕಲಿಸದೆ .....ಪಾಠ ?




ನಿನ್ನೆ ಗುಬ್ಬಚ್ಚಿ ಕಂಡ ಖುಷಿ ....ಅದೇ ನೆನಪಲ್ಲೇ ಇಂದು ಬೆಳಗ್ಗೆ ಎದ್ದವನೇ ತೋಟಕ್ಕೆ ಓಡಿದೆ..
ಅದಾಗಲೇ.... ಗೀಜಗ ಹಕ್ಕಿ ಮನಸ್ಸನ್ನಾವರಿಸಿತ್ತು.....!
ಗೀಜಗ ....ಅದರ ಗೂಡನ್ನ ನೋಡುವುದೇ ....ಸೋಜಿಗ....!
ಎಲ್ಲರೂ ಮನೆಯನ್ನ ಕಟ್ತಾರೆ ....ಹೆಚ್ಚೆಂದರೆ ಮನೆಯೊಳಗೆ ತೂಗುಯ್ಯಾಲೆ ಇಡ್ತಾರೆ 
ಆದರೆ .... ಹಕ್ಕಿ ಇದೆಯಲ್ಲ ....ಗೀಜಗ ಇದು ಕಟ್ಟುವ ಮನೆಯೆ ತೂಗುಯ್ಯಲೆಯಂತಿರುತ್ತದೆ....!
ಮುಂಚೆ ನಮ್ಮನೆ ತೋಟದಲ್ಲಿ ನೂರಾರು ಗೀಜಗ ಗೂಡು ಕಟ್ಟಿರುತಿತ್ತು
ಈಗ ಹೋಗಿ ನೋಡಿದರೆ ....ನಿರಾಸೆ ಕಾದಿತ್ತು ಒಂದೇ ಒಂದು ಗೂಡೂ ಕಣ್ಣಿಗೆ ಗೋಚರಿಸಲಿಲ್ಲ .
ಮಾನವನ ಆಧುನಿಕತೆಯ ನಾಗಾಲೋಟದಲ್ಲಿ ಗೀಜಗ ನಂತ ಅದೆಷ್ಟೋ ಜೀವ ಜಂತುಗಳು  
ವಿನಾಶದೆಡೆಗೆ ಜಾರಿದವೋ .....ಗಮನಿಸುವ ಪುರುಸೊತ್ತು .ವ್ಯವಧಾನ ನಮಗೆಲ್ಲಿದೆ ಹೇಳಿ ....?
ಓಡುತ್ತಲೇ ಇದ್ದೇವೆ .....ಮುಟ್ಟುವ ಗುರಿ ಮಾತ್ರ ......ಅಗೋಚರ ...!
ಭೂಮಿಯ ಒಡಲನ್ನ ,ಪ್ರಕೃತಿ ಮಡಿಲನ್ನ,ಅಮೂಲ್ಯ ಜೀವಸಂಕುಲವನ್ನ ....
ಹೀಗೆ ಎಲ್ಲವನ್ನ ಬರಿದಾಗಿಸುತ್ತಿದ್ದೇವೆ .....ಎಷ್ಟು ತಿಂದರೂ ತೇಗದು ನಮ್ಮ ಒಡಲು...
ಏನೇ ಇರಲಿ ... ಪ್ರಕೃತಿ ಬದುಕನ್ನು ಕಟ್ಟಿಕೊಡುತ್ತದೆ :ಬದುಕನ್ನು ಕಸಿದುಕೊಳ್ಳಲಾರದು ,
ಪರಸ್ಪರ ಪೀತಿಸುವುದನ್ನು ಕಲಿಸುತ್ತದೆ:ಪ್ರೀತಿಸುವುದನ್ನೇ ಆಶಿಸುತ್ತದೆ ....
ಅನುಭವ ಬದುಕನ್ನು ಮುನ್ನಡೆಸುತ್ತದೆ..ಎಲ್ಲೋ ಕೇಳಿದ ನೆನಪು ..
"ಪ್ರಕೃತಿಗಿಂತ ಚೆನ್ನಾಗಿ ಯಾರು ಪಾಠವನ್ನು ಕಲಿಸಬಲ್ಲರು ...?
ಅನುಭವಕ್ಕಿಂತ ಚೆನ್ನಾಗಿ  ಜೀವನ ವಜ್ರವನ್ನ ಯಾರು ಸಾಣೆ ಹಿಡಿಯಬಲ್ಲರು....?"
ಈಗಾಗಲೇ... ಪ್ರಕೃತಿ ಗುಬ್ಬಿಗೆ ಬದುಕುವ ಪಾಠ ಕಲಿಸಿದೆ ; ಮುಂದೊಂದು ದಿನ ಗೀಜಗನಿಗೂ 
ಬದುಕುವ ಭಾಗ್ಯ ದಕ್ಕಬಹುದು... ಆದರೆ ...ಇದೇ ರೀತಿ ಭೂಮಿಯ ಒಡಲನ್ನ ಬರಿದಾಗಿಸುತ್ತ ಹೋದರೆ .....
ನಮ್ಮನ್ನ ರಕ್ಷಿಸುವವರಾರು .....?
ಗೂಡು ಕಟ್ಟುವುದರಲ್ಲಿ ಗೀಜಗನಿಗಿರಬಹುದಾದ ಶ್ರದ್ಧೆ :ಬದುಕು ಕಟ್ಟಿ ಕೊಳ್ಳುವುದರಲ್ಲಿ ನಮಗೂ ಅಂತಹ ಕನಸುಗಳಿರಲಿ 
-ವಿಶ್ವೇಶ್ವರ ಎಂ ಎಸ್ 
ಸನ್ ಟೈಮ್ ಎಲೆಕ್ಟ್ರಾನಿಕ್ಸ್ 



Wednesday, 1 February 2012

ಮತ್ತೆ ಶುರುವಾಗಿದೆ…..ಗುಬ್ಬಿಗಳ ಕಲರವ ....!!

ಮತ್ತೆ ಶುರುವಾಗಿದೆ…..ಗುಬ್ಬಿಗಳ ಕಲರವ ....!!
ಆಗಿನ್ನೂ ನನಗೆ ಎಂಟೋ ಹತ್ತೋ ವರ್ಷ ....ಅಕ್ಕಿ ಮಾಡಿಸೋಕೆ ಅಂತ ಸೋಗೋಡು ಶೇಕರ ಮನೆ ಮುಂದೆ ಎತ್ತಿನ ಗಾಡಿ 
ತಂದು ನಿಲ್ಸದೆ ತಡ ...ನಾವು ಗಾಡಿ ಹತ್ತಿ ಹೊರಡದೆ ...ಅಕ್ಕಿ ಮಿಲ್ಲಲ್ಲಿ ಗುಬ್ಬಚ್ಚಿ ನೋಡೋಕೆ ....!
ಏನ್ ಸಂಬ್ರಮ ಅದು ಅಂತೀರಿ ...? ಹತ್ರ ಹೋದ್ರೆ ಸಾಕು ....ಪುರ್ ಅಂತ ಗುಂಪು ಗುಂಪಾಗಿ ಹಾರೋದು .....
ಮತ್ತೆ  ಗುಂಪು ಗುಂಪಾಗಿ  ಬರ್ ಅಂತ ಬಂದು ಕೂರೋದು ....
ಕಲರವ ....ಅವು ಮೈ ಕೊಡವಿ ,ಮೂತಿ ನೆಲಕ್ಕೆ ತಿಕ್ಕಿ ಕಾಳು ಕಚ್ಚಿ ಹಾರೋ ರೀತಿಯೇ ...ನೋಡೋದಕ್ಕೆ ಒಂತರಾ ಖುಷಿ ...
ಹಿಂಡು ಹಿಂಡಾಗಿ ಸಾವಿರ ಸಾವಿರ ಸಂಖ್ಯೆಯಲ್ಲಿ ಅವು ಬದುಕುವ ರೀತಿಯೇ ಬಲು ಸೊಗಸಾಗಿತ್ತು
ಭಾಸ್ಕರನ ದಿನಸಿ ಅಂಗಡಿಯಿಂದ ಕಾಡಿ ಬೇಡಿ ತಂದ ಕಸ್ತೂರಿ ನೀಲಂ ಬಾರ್ ಸೋಪಿನ ಪೆಟ್ಟಿಗೆಯನ್ನ  
ನೀಟಾಗಿ ಜೋಡಿಸಿ ...ಮದ್ಯೆ ಒಂದು ಕೈ ತೂರುವಷ್ಟು ರಂಧ್ರ ಕೊರೆದು  
 ಮನೆ ಮಾಡಿಗೊ ತೊಲೆಗೋ ಕಟ್ಟಿ ಇಟ್ರೆ ಸಾಕು ಅದೇ ಅವಕ್ಕೆ ಅರಮನೆ ...!
ಹುಲ್ಲು ಕಡ್ಡಿ ಹತ್ತಿ ಹೀಗೇ ತಮಗೆ ಬೇಕಾದನ್ನ ತಂದು ಗೂಡನ್ನ ಬೆಚ್ಚಗೆ ಇಟ್ಟುಕೊಳ್ಳುತ್ತವೆ
ಈಗೆಲ್ಲಿದೆ ... ಕಲರವ ....?
ಈಗಿನ ಅಕ್ಕಿ ಮಿಲ್ಲುಗಳು ಭಣ ಭಣ ....ಮಿಲ್ಲಿನ ಕರ್ಕಶ ಶಬ್ದ  ಬಿಟ್ರೆ ಬೇರೇನೂ ಇಲ್ಲ ....
ಬಾನಾಡಿಗಳು ಎಲ್ಲಿ ಹಾರಿ ಹೋದವು ...?
ಪಾಪ ...ಮೊಬೈಲ್ ಟವರಿನ ತರಂಗಾಂತರಗಳಿಗೆ ನಲುಗಿ ಹೋದವೇ ಅವು ...?
ಮೊಬೈಲ್ ರಿಂಗಣಗಳ ಬರಾಟೆಯಲ್ಲಿ ಪಾಪ... ಗುಬ್ಬಚ್ಚಿಯ ಚಿಂವ್ ಚಿಂವ್ ನಿನಾದ ನಮಗಾರಿಗೂ ಕೇಳಲೇ ಇಲ್ಲ ..
ಹೀಗೆ ಅಂದುಕೊಂಡು ಗುಬ್ಬಚ್ಚಿಯನ್ನ ನೆನೆಪು ಮಾಡಿ ಕೊಳ್ಳುತ್ತಲೇ 
ಈಗ ನನ್ನ ಅಂಗಡಿ ಮುಂದೆ ಇರುವ ಅಕ್ಕಿ ಮಿಲ್ಲಿಗೆ  ಹೋದೆ ....
ಆಶ್ಚರ್ಯ ಕಾದಿತ್ತು ನನಗೆ ....! 
ಮತ್ತೆ ಶುರುವಾಗಿದೆ    ಗುಬ್ಬಿಗಳ ಕಲರವ ....!!
ಕಳೆದ ಒಂದಷ್ಟು ವರ್ಷ ಕಾಣೆಯೇ ಆಗಿಹೋಗಿದ್ದ ಗುಬ್ಬಚ್ಚಿಗಳು ಮತ್ತೆ... ಚಿಂವ್.. ಚಿಂವ್ ನಿನಾದ ಗೈಯುತ್ತಿವೆ 
ಮರಳಿ ಬದುಕಿನ ಹಕ್ಕನ್ನು  ಗುಬ್ಬಿ ಮತ್ತೆ ಪಡೆದಿದೆ ....!
ಹ್ಯಾಟ್ಸಾಪ್.....ಗುಬ್ಬಿಗಳೇ .....! ಮನುಷ್ಯನ ಆಧುನಿಕ ಮೋಹ ಪಾಶಕ್ಕೆ ಸಿಲುಕಿಯೂ ... ಜಯಿಸಿ ಬಂದದಕ್ಕೆ ...!
-ವಿಶ್ವೇಶ್ವರ ಎಂ ಎಸ್
ಸನ್ ಟೈಮ್ ಎಲೆಕ್ಟ್ರಾನಿಕ್ಸ್




Tuesday, 31 January 2012

ಪರಿಶ್ರಮದ ಪಾಠ ....


                          
ಸಾಲಾಗಿ ಸಾಗುವ ಇರುವೆಯ ಸಾಲನ್ನೊಮ್ಮೆ ಹಾಗೇ ಗಮನಿಸಿ... ಎಷ್ಟೊಂದು ಏಕಾಗ್ರತೆ ....! ಕೇವಲ ತಮ್ಮ ಗಮ್ಯದತ್ತ ಅವುಗಳ ಚಿತ್ತ 
ಸಾಲಾಗಿ ಸಾಗುತ್ತಿರುವ ಇರುವೆಯನ್ನೊಮ್ಮೆ ನಿಮ್ಮ ಬೆರಳಿನಿಂದ ಸರಿಸಿ ಬಿಡಿ.. ಎಲ್ಲಾ ಚೆಲ್ಲಾಪಿಲ್ಲಿ .....ಸ್ವಲ್ಪ ಹೊತ್ತು ಹಾಗೇ ಗಮನಿಸಿ ....
ಮತ್ತದೇ ಸಾಲು ......ಮತ್ತೆ ನಿಮ್ಮ ಬೆರಳಿನಿಂದ ......ಹೀಗೇ ಎಷ್ಟೇ  ಸಾರಿ ನೀವು ಇರುವೆ ಸಾಲಿಗೆ ಭಂಗ ತನ್ನಿ .....ಅವು 
ತಮ್ಮ ಓಟವನ್ನ ನಿಲ್ಲಿಸಲಾರವು ...ತಾವು ಸೇರಬೇಕಾದ ಗುರಿಯನ್ನ ತಲುಪುವತ್ತ ಅವುಗಳ ಪ್ರಯತ್ನ ನಿರಂತರ .....
ನಾವು.....?
ಕೆಲಸ ಶುರುವಿಟ್ಟುಕೊಳ್ಳುವಾಗಲೇ .....ಇದು ಸಾಧ್ಯನಾ .....ನಂನಿಂದಾಗತ್ತಾ.....? ಸುಮ್ನೆ ಯಾಕೆ  ಶ್ರಮ ....?
ಸಾಕು... ಅಪ್ಪ ಮಾಡಿಟ್ಟ ಅಡಿಕೆ ಕಾಯಿ ಹೆಕ್ಕ್ಯಂಡು ....ಹಂಗು ಹಿಂಗೂ ......ಕಾಲ ಕಳದ್ರಾತು ....!
ಆದರೆ...ಗಮನಿಸಿ....
ಒಂದು ಇರುವೆ ಕೂಡ ಮುಂದೆ ಬರಬಹುದಾದ ಮಳೆಗಾಲಕ್ಕೆ ಈಗಿನಿಂದಲೇ ಸಿದ್ದತೆ ಮಾಡಿಕೊಳ್ಳುತ್ತೆ ,ಅಹಾರವನ್ನ 
ಗೂಡಿನಲ್ಲಿ ಶೇಕರಿಸಿಕೊಳ್ಳುತ್ತದೆ .
 ಇರುವೆ,ಜೆನ್ನೋಣ,ಗೆದ್ದಿಲುಗೆಳೆ ನಮಗೆ ರೋಲ್ ಮಾಡೆಲ್ ಆಗಬೇಕು ಎನಿಸುತ್ತದೆ 
ಬೃಹದಾಕಾರವಾಗಿ ಬೆಳೆದು ನಿಂತ ಮರವನ್ನ ಹೇಗೆ ಗೆದ್ದಿಲು ಹುಳು ಇನ್ನಿಲ್ಲವಾಗಿಸುತ್ತವೆ ನೋಡಿ ....
ಅವುಗಳಲ್ಲಿ ಇರಬಹುದಾದ ಕಾರ್ಯ ಕ್ಷಮತೆಗೆ  ಇದೊಂದು ಉದಾಹರಣೆಯಷ್ಟೇ .
ಗೆದ್ದಿಲುಗಳು ಕಟ್ಟಬಹುದಾದ ಹುತ್ತವನ್ನೊಮ್ಮೆ ಗಮನಿಸಿ....ಯಾವ ಆರ್ಕಿಟೆಕ್ಕಿಗೆ ಕಡಿಮೆ ಹೇಳಿ ...
ಅಷ್ಟೇ  ಅಲ್ಲ .... ಮನೆಯನ್ನ ಕೆಡವಿಹಾಕಿ... ಮಾರನೇ ದಿನ ಹೋಗಿ ನೋಡಿ...
ನೀವು ಬೆರಗಾಗಿ ಹೋಗಬೇಕು ....! ನೀವು ಕೆಡವಿದ್ದು ಎನ್ನುವ ಕುರುಹೂ ಕೂಡ ನಿಮಗೆ ಸಿಗಲಿಕ್ಕಿಲ್ಲ .....!!
ಅಷ್ಟು ಅಚ್ಚುಕಟ್ಟಾಗಿ ಮತ್ತೆ ಕಟ್ಟಿ ನಿಲ್ಲಿಸುವುದರಲ್ಲಿ ಗೆದ್ದಿಲುಗಳ  ಸಾಮರ್ಥ್ಯ ಅಸಾಧಾರಣವೇ ಸರಿ
ಇನ್ನು ಜೆನ್ನೋಣ ....ಅವು ನಿರ್ಮಿಸುವ ಮನೆ .... ಮನೆಯ ಪ್ರತಿಯೊಂದು ಕೋಣೆ,ಒಂಚೂರು ವ್ಯತ್ಯಾಸವಿಲ್ಲದ ಅದರ ಅಳತೆ
ಸ್ವಚ್ಛತೆ ಅವುಗಳ ಶಿಸ್ತುಬದ್ಧ ಬದುಕಿನ ಕ್ರಮ ....
ಎಲ್ಲಾ ಸಂಗತಿಗಳು ಅವುಗಳಲ್ಲಿ ಕರಾರುವಕ್ಕಾಗಿ ನಡೆಯುವ ಬಗೆ ಹೇಗೆ ....?
ಅದೇ ...ಅವುಗಳಲ್ಲಿನ ಶಿಸ್ತುಬದ್ಧ ಸಂಘಟನೆಯಿಂದ .....!
ಸಂಘಟನೆ ಎಂದರೆ....? ವಿಘಟನೆಯಿಲ್ಲದ್ದು .....!!
ಇರುವೆ ಗೆದ್ದಿಲು ಹಾಗು ಜೆನ್ನೋಣ ಗಳಲ್ಲಿ ಅಂತಹ ವ್ಯವಸ್ಥಿತ ವಾದ ಸಂಘಟನೆಯನ್ನ ನಾವು ಕಾಣುತ್ತೇವೆ 
ಅವುಗಳಿಗೆ ಕಟ್ಟುವುದಷ್ಟೇ ಗೊತ್ತು ....ಮುನ್ನಡೆಯುವುದರಲ್ಲಿಯೇ ಬದುಕಿನ ಸಾರ್ಥಕತೆ ....!
ಇಲ್ಲಿ ನಾಯಕತ್ವ ಪ್ರಧಾನ ಪಾತ್ರ ವಹಿಸುತ್ತದೆ ಅದರ ನಿರ್ದೇಶನದ ಮೇರೆಗೇ ಎಲ್ಲಾ ನಡೆಯುವಂತಾದ್ದು
ಹಾಗೆಯೇ ನಮ್ಮಲ್ಲೂ ಅಂತಹ ಸಮರ್ಥ ನಾಯಕತ್ವ ಗುಣವನ್ನ ಬೆಳೆಸಿಕೊಳ್ಳಬೇಕು ....
ಯಶಸ್ಸು ಸಿಗಬೇಕಾದರೆ ...ಪರಿಶ್ರಮ ಇರಬೇಕು... ಪರಿಶ್ರಮ ಪಡಬೇಕೆಂದರೆ... ಏಕಾಗ್ರತೆ ಬೇಕು
ಎಲ್ಲವನ್ನ ನಿಭಾಯಿಸಬಲ್ಲ ಸಾಮರ್ಥ್ಯ  ಬೇಕು ....
ಇದಿಷ್ಟು  ಸಾದ್ಯ ಅಂತಾದರೆ ....
ನಾವಗಲೇ ನಾಯಕತ್ವ ಗುಣವನ್ನ ಹೊಂದಿದ್ದೇವೆ  ಅಂತಲೇ ಅರ್ಥ ...!
ಆದರೆ....
  ಸಣ್ಣ ಕೀಟಗಳಿಗೆ ಹೋಲಿಸಿದರೆ ......ನಾವು ಅವುಗಳಿಂದ  ಕಲಿಯಬೇಕಾದ್ದು ,ಮತ್ತು
 ನಮ್ಮ ಬದುಕಿಗೆ ಅಳವಡಿಸಿ ಕೊಳ್ಳಬೇಕಾದ್ದು ತುಂಬಾ ಇದೆ ಅನಿಸುವುದಿಲ್ಲವೇ ....?


ಖಂಡಿತಾ ......
-ವಿಶ್ವೇಶ್ವರ ಎಂ ಎಸ್
ಸನ್ ಟೈಮ್ ಎಲೆಕ್ಟ್ರಾನಿಕ್ಸ್